ಬಿಳೀಬೂರುಗ -
ಬಾಂಬಕೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ವೃಕ್ಷ (ಹ್ವೈಟ್ ಸಿಲ್ಕ್ ಕಾಟನ್ ಟ್ರೀ, ಟ್ರೂ ಕಫೋಕ್ ಟ್ರೀ). ಸೈಬ ಪೆಂಟಾಂಡ್ರ ವ್ಶೆಜ್ಞಾನಿಕ ಹೆಸರು. ಭಾರತದ ಪಶ್ಚಿಮ ಹಾಗೂ ದಕ್ಷಿಣ ಪ್ರದೇಶಗಳು, ಶ್ರೀಲಂಕಾ, ಬರ್ಮ, ಮಲಯ, ಜಾವ, ಮುಂತಾದೆಡೆಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ.
ಇದು 15-30 ಮೀ. ಎತ್ತರಕ್ಕೆ ಬೆಳೆಯುವ ಮೃದುಕಾಂಡದ ಮರ. ತೊಗಟೆ ಬೂದು ಬಣ್ಣದ್ದು. ಕೊಂಬೆಗಳು ಅಡ್ಡಡ್ಡಲಾಗಿ ಹರಡಿಕೊಂಡು ಬೆಳೆಯುವುವು. ಎಲೆಗಳು ಹಸ್ತಾಕಾರದವು; ಸಂಯುಕ್ತ ಬಗೆಯವು. ರೆಂಬೆಗಳು ಎಳೆಯವಾಗಿರುವಾಗ ಮುಳ್ಳುಗಳಿಂದ ಆವೃತವಾಗಿರುವುವು. ಡಿಸೆಂಬರ್ ವೇಳೆಗೆ ಎಲೆಗಳೆಲ್ಲ ಉದುರಿ ಏಪ್ರಿಲ್ ಹೊತ್ತಿಗೆ ಹೊಸ ಎಲೆಗಳು ಹುಟ್ಟುವುವು. ಹೂಗಳು ಅರಳುವುದು ಜನವರಿ-ಫೆಬ್ರವರಿ ತಿಂಗಳುಗಳಲ್ಲಿ, ಕಾಯಿಗಳು ಅಂಡಾಕಾರದವು; ಇವುಗಳ ಉದ್ದ ಸುಮಾರು 12 ಸೆಂ.ಮೀ; ವ್ಯಾಸ ಸುಮಾರು 5 ಸೆಂ.ಮೀ. ಒಳಗೆ ಕರಿಯ ಬಣ್ಣದ ಅಸಂಖ್ಯ ಬೀಜಗಳುಂಟು. ಬೀಜಗಳ ಸುತ್ತ ಬಿಳಿಯಬಣ್ಣದ ನಯವಾದ ರೇಷ್ಮೆಯಂಥ ತುಪ್ಪುಳು ಇದೆ. ಇದೇ ಬಿಳೀ ಬೂರುಗದರಳೆ, ಅಥವಾ ಬಿಳೀ ಬೂರುಗದ ಹತ್ತಿ. ಇದು ಹಗುರವಾದ, ನಯವಾದ, ಹೊಳಪಿನಿಂದ ಕೂಡಿದ ಬಿಧುರ ವಸ್ತು. ಇದರ ಪ್ರತಿ ಎಳೆಯೂ ಸುಮಾರು 2.5 ಸೆಂ.ಮೀ ಉದ್ದ ಇರುತ್ತದೆ. ಇದು ಜಲಾಭೇದ್ಯವಾಗಿದೆಯಲ್ಲದೆ ಅತಿ ಹೆಚ್ಚಿನ ಪ್ಲವನತೆಯನ್ನು ಪಡೆದಿದೆ. ಪ್ರತಿ ಮರದಿಂದ ಸರಾಸರಿ 5 ಕೆಜಿ ಹತ್ತಿದೊರೆಯುತ್ತದೆ. ಮರ ತನ್ನ ಬೆಳೆವಣಿಗೆಯ 4-5ನೆಯ ವರ್ಷದಿಂದ ಇಳುವರಿ ನೀಡಲಾರಂಭಿಸಿ, 15ನೆಯ ವಯಸ್ಸಿಗೆ ಗರಿಷ್ಠ ಮೊತ್ತದಲ್ಲಿ ಹತ್ತಿಯನ್ನು ಕೊಡುತ್ತದೆ. ಚೆನ್ನಾಗಿ ಬಲಿತ ಕಾಯಿಗಳನ್ನು ಅವು ಸ್ವಾಭಾವಿಕವಾಗಿ ಬಿರಿಯುವ ಮೊದಲೆ ಕಿತ್ತು ಬಿಸಿಲಿನಲ್ಲಿ ಒಣಗಿಸಿ ಮರದ ಸುತ್ತಿಗೆಗಳಿಂದ ಬಡಿಯಲಾಗುತ್ತದೆ. ಬೀಜಸಹಿತ ಹತ್ತಿಯನ್ನು ಹೊರತೆಗೆದು ಮತ್ತಷ್ಟು ಒಣಗಿಸಿ ಬೀಜಗಳನ್ನು ಬೇರ್ಪಡಿಸಲಾಗುತ್ತದೆ.

ದಿಂಬು, ಹಾಸಿಗೆ, ಮೆತ್ತೆ ಮುಂತಾದವುಗಳ ಭರ್ತಿಗೆ ಈ ಹತ್ತಿಯನ್ನು ಉಪಯೋಗಿಸುವುದಲ್ಲದೆ ಇದಕ್ಕೆ ಜಲಾಭೇದ್ಯಗುಣವೂ ಪ್ಲವನತೆಯೂ ಇರುವುದರಿಂದ ನೌಕಾ ಉದ್ಯಮದಲ್ಲಿ ಲೈಫ್ ಬಾಯ್, ರಕ್ಷಕ ಪಟ್ಟೆ, ಸೊಂಟಕವಚ ಮುಂತಾದ ಜೀವರಕ್ಷಕ ಸಾಧನಗಳ ತಯಾರಿಕೆಯಲ್ಲಿ ಇದನ್ನು ಬಳಸುವುದಿದೆ. ಹಗುರತನ, ಜಲನಿರೋಧಗುಣ ಪ್ಲವನತೆ ಅಗತ್ಯವಿದ್ದ ಸಂದರ್ಭಗಳಲ್ಲಿ ಕಾರ್ಕಿಗೆ ಬದಲಾಗಿ ಬಿಳೀಬೂರುಗದರಳೆಯನ್ನೂ ಮಹಾಯುದ್ಧದ ವೇಳೆ ಬಳಸಿದ್ದುಂಟು. ಅಲ್ಲದೆ ಔಷ್ಣೀಯ ಹಾಗೂ ಧ್ವನಿ ಅವಾಹಕವಾಗಿ ರೆಫ್ರಿಜಿರೇಟರುಗಳು, ಶೈತ್ಯಾಗಾರಗಳು, ಕಾರು, ವಿಮಾನ ಕ್ಯಾಬಿನ್ನುಗಳು, ರೇಡಿಯೋ ಪ್ರಸರಣ ಸ್ಟುಡಿಯೋ, ಆಸ್ಪತ್ರೆಗಳು ಮುಂತಾದೆಡೆಗಳಲ್ಲಿ ಇದು ತುಂಬಾ ಉಪಯುಕ್ತವೆನಿಸಿದೆ.

ಇದು ಬಿಧುರ, ನಯ ಮತ್ತು ಜಾರುವಂಥದು ಆಗಿರುವುದರಿಂದ ಇದರಿಂದ ದಾರ ಹೊಸೆಯುವುದಾಗಲಿ ಬಟ್ಟೆ ತಯಾರಿಸುವುದಾಗಲಿ ಆಗದು ಎಂದು ಬಗೆಯಲಾಗಿತ್ತು. ಆದರೆ ಇದರಿಂದ ನೇರವಾಗಿಯೊ ಹತ್ತಿಯೊಂದಿಗೆ ಮಿಶ್ರಮಾಡಿಯೊ ದಾರ ತಯಾರಿಸಲು ಯುಕ್ತವಾದ ಯುಂತ್ರಗಳನ್ನು ರೂಪಿಸಲಾಗಿದ್ದು, ಹೀಗೆ ಸಿದ್ಧಪಡಿಸಿದ ಬಟ್ಟೆ ಆಟಗಾರರು ಬೇಟೆಗಾರರು ತೊಡುವ ಮೇಲಂಗಿಗಳ ತಯಾರಿಕೆಯಲ್ಲಿ ಬಳಕೆ ಯಾಗುತ್ತಿದೆ.

ಈ ಮೇಲಿನ ಉಪಯೋಗಗಳಿಗೆ ಅಗತ್ಯವಾಗುವ ಬೂರುಗದರಳೆ ಪೂರೈಕೆಯಾಗುವುದು ಜಾವದಿಂದ. ಭಾರತದಲ್ಲಿ ಇದನ್ನು ಬೆಳಸುವುದಕ್ಕೆ ಯುಕ್ತವಾದ ಪ್ರದೇಶಗಳಿದ್ದರೂ ಬೃಹತ್ಪ್ರಮಾಣದಲ್ಲಿ ಇದನ್ನು ಬೆಳೆಸುವ ಯತ್ನ ನಡೆದಿಲ್ಲ.

ಬಿಳೀಬೂರುಗದ ಬೀಜದಿಂದ ಹತ್ತಿ ಎಣ್ಣೆಯಂಥ ಎಣ್ಣೆಯನ್ನು ಪಡೆಯಬಹುದು. ಬೀಜ ಮತ್ತು ಬೀಜದ ಹಿಂಡಿ ದನಗಳಿಗೆ ಉತ್ತಮ ತಿನಿಸು. ಈ ಮರದ ಚೌಬೀನೆ ಹಗುರ ಬಗೆಯದು. ದೋಣಿ, ಆಟಿಗೆ, ಬೆಂಕಿಕಡ್ಡಿ ತಯಾರಿಕೆಗೆ ಉಪಯುಕ್ತ.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ